Wednesday, 30 October 2013

ಆಚಾರವಿಲ್ಲದ ನಾಲಗೆ


ಆಚಾರವಿಲ್ಲದ ನಾಲಗೆ 

       ಅವಳ ಹೆಸರು ಸ್ವೇಚ್ಚಾ. ಹೆಸರಿಗೆ ತಕ್ಕಂತೆ ಬಿಂದಾಸ್ ಬದುಕು ಅವಳದ್ದು. ಮಾತಿಗೆ ಮಾತು, ಏಟಿಗೆ ಏಟು , ಏಲ್ಲವೂ ನೇರಾ ನೇರಾ. ಸುಂದರಿಯೇ.. ಆದರೂ ಅವಳ ಉಡುಗೆ ತೊಡುಗೆ ವಿಚಿತ್ರ. ಸೋ ಕಾಲ್ಡ್ ಮಾಡರ್ನ್ ಹುಡುಗಿ ಅಂತ್ಹೇಳಬಹುದು. ಅವಳು ತನ್ನ ಆಫೀಸಿಗೆ ಎಂಟ್ರಿ ಕೊಟ್ಳು ಅಂದ್ರೆ ಕೆಲಸ ಇಲ್ಲದ ಆಫೀಸಿನ ಪಡ್ಡೆಗಳು ಹಿಂದಿನಿಂದ ಆಕೆಯ ಬಗ್ಗೆ ಇಲ್ಲದ ಮಾತಾಡ್ತಾ.. ಆಕೆಯನ್ನ ಅಡಿಯಿಂದ ಮುಡಿಯವರೆಗೂ ಗಮನಿಸ್ತಾ..  ಆಕೆಯ ಸುತ್ತ ಕಥೆ ಕಹಾನಿ ಹೆಣೆಯುತ್ತಾ  ಕೂತಿರ್ತಿದ್ರು. ಹೆಣ್ಮಕ್ಳು ಏನ್ ಕಡಿಮೆ ಇಲ್ಲ ಬಿಡಿ. ನಾವು ಸಿಕ್ಕಾಪಟ್ಟೆ ಡೀಸೆಂಟು ಅಂತಾ ತೋರಿಸ್ಕೊಳ್ಳೋ ಚಟದಲ್ಲಿ ಈ ಹುಡುಗರ ಸಾಂಬಾರಿಗೆ ಒಗ್ಗರಣೆ ಹಾಕ್ತಿದ್ರು. ಒಟ್ನಲ್ಲಿ ಸ್ವೇಚ್ಚಾಗೆ ಅರಿವಿಲ್ಲದಂತೆ ಆಕೆ ಸರಿಯಿಲ್ಲದ ಹುಡುಗಿ ಅನ್ನಿಸಿಕೊಂಡ್ಬಿಟ್ಟಿದ್ಲು.. ಅದೇನಾಯ್ತೋ ಗೊತ್ತಿಲ್ಲ ಒಂದಿನ ಆಕೆ ತನ್ನ ಮನೆಯ ಬೆಡ್ ರೂಮಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸಿಕ್ಕಿದ್ಳು.. ಆವತ್ತಿನ ದಿನವೇ ಎಲ್ಲಾರಿಗೂ ಗೊತ್ತಾಗಿದ್ದು ಆಕೆ ಸಾಮಾನ್ಯ ಹೆಣ್ಣಲ್ಲ ಮನೆಯಲ್ಲಿ ಆರೋಗ್ಯ ಸರಿಯಿಲ್ಲದ ತಂದೆ ತಾಯಿ ಓದ್ತಾಯಿರೋ ತಮ್ಮ ತಂಗಿಯರ ಜವಾಬ್ದಾರಿಯನ್ನ ಹೊತ್ತಂತ ದಿಟ್ಟ ಹೆಣ್ಣು ಅಂತಾ. ಹೆಣ್ಣಿನ ಬಗ್ಗೆ ಒಂದು ಮಾತಿದೆ. A women’s greatest strength is her emotions and her greatest weakness is her emotions ಅಂತಾ. ತುಂಬಾ ನಿಜ ಅನ್ನಿಸ್ತು. ಜನರ ಮಾತಿಗೆ ಆ ಹೆಣ್ಣಿನ ಹೃದಯ ನಡುಗಿತ್ತು. ಒದ್ದಾಡಿತ್ತು , ಧೃತಿಗೆಟ್ಟಿತ್ತು. ಕೊನೆಗೆ ಸೋತಿತ್ತು.....  ಇದು ಒಂದು ಉದಾಹರಣೆಯಷ್ಟೆ. ಆದ್ರೆ ಇದಕ್ಕಿಂತಲೂ ಭೀಕರ ,ವಿಚಿತ್ರ ,ಸಮಾಜವೇ ಕೊಂದಂತ ಹೆಣ್ಣುಮಕ್ಕಳಿಗೆ ಮೋಸ್ಟ್ಲಿ ಲೆಕ್ಕಯಿಲ್ಲ. ಲೆಕ್ಕಯಿದ್ರೂ ಅದಿಕ್ಕೆ ಉತ್ತರವೇ ಇರಲ್ಲ ಬಿಡಿ.

ದೆಹಲಿಗ್ಯಾಂಗ್ ರೇಪ್ ,ಮನಿಪಾಲ್ ಗ್ಯಾಂಗ್ ರೇಪ್, ಧರ್ಣಸ್ಥಳ ಕೇಸ್ ಹೆಸರಿಸಬಹುದಾದ ಸುದ್ದಿ ಮಾಡ್ದಂತಹ ಕೆಲವು ಅತ್ಯಾಚಾರ ಪ್ರಕರಣಗಳು. ಆದ್ರೆ ಇವುಗಳಿಗೆ ಹೊರತಾಗಿ ಎಷ್ಟೋ ಲೆಕ್ಕವಿಲ್ಲದಷ್ಟು ಹೆಣ್ಣುಮಕ್ಕಳು ಅತ್ಯಾಚಾರಕ್ಕೊಳಗಾಗ್ತಿದ್ದಾರೆ .  ಅವರದ್ದು ಅರಣ್ಯರೋಧನವಾಗಿದೆ. ಕೃತ್ಯವೆಸಗಿದ ಕೆಲ ಪಾಪಿಗಳು ಕಾನೂನಿನ ಕೈಗೆ ಸಿಕ್ಕಿದ್ದಾರೆ. ಕೆಲವರು ಆರಾಮಾಗಿದ್ದಾರೆ. ಇಂಥ ಪಾಪಿಗಳಿಗೆ ಉಗ್ರಾತಿ ಉಘ್ರ ಶಿಕ್ಷೆಯಾಗಬೇಕು ಅನ್ನೋ , ಈಗಾಗಲೇ ಇರುವಂತ ಕೂಗಿಗೆ ನನ್ನದು ಒಂದು ದನಿ. ಆದ್ರೆ ಇಲ್ಲಿ ನಾನು ಹೇಳೋದಕ್ಕೆ ಹೊರಟಿರೋದು ಬೇರೆ. ರೇಪ್ ಮಾಡಿದಂತಹ ಕ್ರಿಮಿನಲ್ಗಳು ಬೇರೆ. ಇನ್ನು ಕೆಲವರು ನಮ್ಮ ನಿಮ್ಮ ನಡುವಿನಲ್ಲೇ ಅಕ್ಕಪಕ್ಕದ ಹೆಣ್ಣುಮಕ್ಕಳ ಬಗ್ಗೆ ಅಶ್ಲೀಲವಾಗಿ ಅವಹೇಳನಕಾರಿಯಾಗಿ ಮಾತನಾಡುವ ಚಾರಿತ್ರ್ಯವಧೆ ಮಾಡೋ ಕೀಚಕರಿದ್ದಾರೆ.ಅವರುಗಳು ದೈಹಿಕವಾಗಿ ಹೆಣ್ಣಿನ ಅತ್ಯಾಚಾರ ಮಾಡ್ದೇಯಿದ್ರೂ ಹೆಣ್ಣಿನ ಬದುಕನ್ನ ಹಾಳು  ಮಾಡೋದಕ್ಕೆ ಅವರ ಹಾಳು ನಾಲಗೆ ಸಾಕು. ಇಂಥವರೂ ನನ್ನ ಪ್ರಕಾರ ಅತ್ಯಾಚಾರಿಗಳೇ. Verbal rapistಗಳಿಂದ ನಿಜಕ್ಕೂ ಹೆಣ್ಣುಮಕ್ಕಳಿಗೆ ಅನ್ಯಾಯ ಆಗ್ತಿದೆ. ಇದು ಅಕ್ಷಮ್ಯ.
ನಿಮ್ಮ ಮನೆಯ ಮಗಳು ನಿಮ್ಮ ತಾಯಿ ತಂಗಿ ಹೆಂಡತಿ ಎಷ್ಟು ಒಳ್ಳೆಯವರೋ .. ಎಷ್ಟು ಮರ್ಯಾದಸ್ಥರೋ.. ಸಭ್ಯರೋ.. ನಿಮ್ಮ ಪಕ್ಕದ ಮನೆ ಮಹಿಳೆ , ನಿಮ್ಮ ಆಫೀಸಿನ ನಿಮ್ಮ ಕಲೀಗ್ ,ಸಮಾಜದಲ್ಲಿ ಯಾವುದೇ ಕ್ಷೇತ್ರದಲ್ಲಿ ಗುರುತಿಸಿಕೊಂಡ  ಹೆಣ್ಣು , ಅಥವಾ ಯಾರೇ ಆಗಿರಬಹುದು ಆಕೆ ಕೂಡ ಮರ್ಯಾದಸ್ಥಳೇ. ಆಕೆಗೂ ನಿಮ್ಮ ಮನೆಯ ಹೆಣ್ಣುಮಕ್ಕಳಂತೆ ಮಾನ ಅಭಿಮಾನ ಸ್ವಾಭಿಮಾನ ಇದೆ. ಆಕೆ ಸಾರ್ವಜನಿಕ ಸ್ವತ್ತಲ್ಲ ನಿಮ್ಮ ನಾಲಗೆಯ ಚಪಲ ತೀರಿಸಿಕೊಳ್ಳೋಕೆ.. ನಿಮ್ಮ ಗೌರವಕ್ಕೆ ಪಾತ್ರಳಾಗುವಂತ ಎಲ್ಲಾ ಹಕ್ಕು ಆಕೆಗಿದೆ. ನಿಮ್ಮ ಕಣ್ಣಿಗೆ ಇವರುಗಳೆಲ್ಲ ಸನ್ನಡತೆಯವರಲ್ಲ ಅಂತಾದ್ರೆ ನಿಮ್ಮ ಮನೆಯ ಹೆಣ್ಣುಮಕ್ಕಳಿಗೂ ಬೇರೆ ಬಳಗದಿಂದ ಅಂತಹುದ್ದೇ ಹೆಸರು ಬರಬಹುದು ಜೋಕೆ.
ಹೆಣ್ಣು ಒಂದು ಸುಂದರ ಜೀವ. ಆಕೆಯ ಯೋಚನೆ ಆಲೋಚನೆ ಎಲ್ಲವೂ ತಾನು ಪ್ರೀತಿಸುವವರಿಗಾಗಿ. ಆಕೆಗೊಂದು ಮುದ್ದಾದ ಮನಸ್ಸಿದೆ.  ಆಕೆ ನಿಮ್ಮ ಪ್ರೀತಿ ಅಭಿಮಾನಕ್ಕೆ ಅರ್ಹಳೇ ಹೊರತು ನಿಮ್ಮ ಕುಚೋದ್ಯಕ್ಕಲ್ಲ. ನಿಮ್ಮ ಕಾಮನೆಗಳ ಪೂರೈಕೆಗಲ್ಲ. ಅವಳನ್ನ ಹೊರಗಣ್ಣಿನಿಂದ ಅಳೆಯೋದನ್ನ ಬಿಟ್ಟುಬಿಡಿ... ವೇಷ್ಯೆ ಅನ್ನಿಸಿಕೊಂಡ ಹೆಣ್ಣು ಕೂಡ ಮನಸ್ಸಿನಾಳದಲ್ಲಿ ಭೋರ್ಗರೆಯುವ ನೋವಿನ ಸಮುದ್ರವನ್ನ ಹೊತ್ತಿರ್ತಾಳೆ. ಪರಿಸ್ಥಿಯ ಕೈಗೊಂಬೆಯಾಗಿರ್ತಾಳೆ. ಬೇರೆ ಹೆಣ್ಣುಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡುವ ಸಮಯವನ್ನ ನಮ್ಮ ಸುರಕ್ಷತೆಗಾಗಿ  ನಮ್ಮ ಮನೆಯ ಹೆಣ್ಣುಮಕ್ಕಳ ಸುರಕ್ಷತೆಗಾಗಿ, ಅವರುಗಳ ಏಳ್ಗೆಗಾಗಿ ಕಳೆದರೆ ಎಲ್ಲಾರಿಗೂ ಒಳ್ಳೇದಲ್ವಾ. ಕೆಲವರು ಮಾತಿನ ಈಟಿಗೆ ಎದೆ ಕೊಡ್ತಾರೆ. ಆದ್ರೆ ಕೆಲವರಿಗೆ ಆ ಮಾನಸಿಕ ಸ್ಥೈರ್ಯಯಿರೋದಿಲ್ಲ. ನಾವು ಮುಂದುವರೆದಿದ್ದೀವಿ, 21ನೇ ಶತಮಾನದಲ್ಲಿದ್ದೀವಿ ಅಂದ್ರೂ ಸಮಾಜ ಇನ್ನೂ ಶೇ 70ರಷ್ಟು ಹಳೆಯ ಮನಸ್ಥಿತಿಯಲ್ಲೇ ಇದೆ
ಕಾರಣವೇಯಿಲ್ಲದೆ ಹೆಣ್ಣುಮಕ್ಕಳ ಬಗ್ಗೆ ಕ್ಷಲ್ಲಕವಾಗಿ ಮಾತನಾಡುವ, ಚಾರಿತ್ರ್ಯವಧೆ ಮಾಡುವ ಎಲ್ಲಾರಿಗೂ ನನ್ನ ಹಾಗು ನನ್ನಂತ ಸಮಾನ ಮನಸ್ಕರ ಧಿಕ್ಕಾರ...

No comments:

Post a Comment